ಕಿವಿಗೆ ರೆಪ್ಪೆಯಿಲ್ಲದಿರುವುದು ಒಂದು ರೀತಿಯ ಶಾಪ ಹಾಗೂ ವರದಾನ!
ಪಾರ್ಕಿನಲ್ಲಿ ನಡೆಯುವಾಗ ಮಧ್ಯವಯಸ್ಕರಿಬ್ಬರು ಜೋರಾಗೆ ಮಾತಾಡಿಕೊ೦ಡು ಹೋಗುತ್ತಿದ್ದದ್ದು ಈ
ರೆಪ್ಪೆಯಿಲ್ಲದ ಕಿವಿಗೆ ಬಂದು ತಾಕಿ ತಲೆಯನ್ನೂ ಹೊಕ್ಕಿ ಬಿಟ್ಟಿತು. ಸರಿ, ಅವರು ಯಾರೋ ತಾನು
ಮಾಡಿದ ಸಹಾಯವನ್ನು ನೆನೆಯದೇ, ಋಣ ಸಂದಾಯ ಮಾಡದೆ ವರ್ತಿಸುತ್ತಿದ್ದಿದ್ದನ್ನು ಬಹಳ ನೋವಿನಿಂದ ಚರ್ಚಿಸುತ್ತಾ
ಜರಿಯುತ್ತಿದ್ದರು. ಬೇಸರವೆನಿಸಿತು. ಹೇಗಲ್ಲವೇ? ಹಾಗೆ ನೋಡಿದರೆ ಸಹಾಯ ಮಾಡಿಸಿಕೊಂಡವರು ಅದನ್ನು ನೆನೆಯಬೇಕು
ಮತ್ತು ಸಹಾಯ ಮಾಡಿದವರು ಸ್ಮರಿಸಿ ಲೆಕ್ಕ ಇಡಕೂಡದು ಎನ್ನುತ್ತಾರೆ. ಆದರೆ ಸಹಾಯವನ್ನು
ಮಾಡಿಸಿಕೊಂಡು ಕಿಂಚಿತ್ತೂ ನೆನೆಯದ, ಸಾಕಷ್ಟು ಬಾರಿ ದ್ರೋಹವನ್ನೂ ಬಗೆಯುವ ಪರಿಪಾಠವಿರುವವರೇ ಹೆಚ್ಚಿರುವ ಕಾರಣ ಸಹಾಯ ಮಾಡಿದವರು ನೋವಿನಲ್ಲಿ
ಅಪಾತ್ರರಿಗೆ ಮಾಡಿದ ಸಹಾಯವನ್ನು ನೆನೆಯುವ೦ತಾಗಿದೆಯೇನೋ! ಒಟ್ಟಾರೆ, ಒಂದಷ್ಟು ಕೃತಜ್ಞತಾ ಮನೋಭಾವ
ಸಹಾಯ ಮಾಡಿಸಿಕೊ೦ಡವರಿಗೂ, ಮಾಡಿಸಿಕೊ೦ಡವನ ನಾಳಿನ ಸ್ವಭಾವಕ್ಕೆ ಚಿ೦ತಿಸದೇ, ಮಾಡಬೇಕೆನ್ನುವ
ಸದುದ್ದೇಶ ಮತ್ತು ಅದರಿಂದ ದೊರೆಯುವ ಧನ್ಯತಾಭಾವಗಳಿಗಷ್ಟೇ ಸಹಾಯ ಮಾಡುವ ಸಬಲ ಮನಸ್ಸು ಸಹಾಯಹಸ್ತ
ನೀಡುವ ಸಹೃದಯರಿಗೂ, ನಮ್ಮೆಲ್ಲರಿಗೂ ಬರಲಿ ಎ೦ದು ಆಶಿಸಬಹುದಷ್ಟೇ!
~ಸುಷ್ಮ # ನೆನಪಿನಿಂದ
1 comment:
ಹಲವು ಜನರ ವಿಶ್ವಾಸದ್ರೋಹ ಮತ್ತು ಮರೆಯುವಿಕೆಯ ಪ್ರವೃತ್ತಿ ಖಂಡನೀಯ!
Post a Comment