ನಾವು ಚಿಕ್ಕವರಿದ್ದಾಗ ಎಷ್ಟೋ ಸಾರಿ ಎಡವಿದ್ದೇವೆ, ತೊದಲಿದ್ದೇವೆ ಅದರೂ ನಡೆಯುವುದನ್ನು, ಮಾತನಾಡುವುದನ್ನು, ಆ ತೊದಲು, ಎಡರುಗಳು ತಪ್ಪಿಸಲಾಗಲಿಲ್ಲ. ಅತ್ಮಸ್ಥೈರ್ಯವೆ೦ದರೇನೆ೦ಬುದನ್ನು ಹೊಸದಾಗಿ ಕಲಿಯಬೇಕಾಗಿರಲಿಲ್ಲ, ಬದಲಾಗಿ ಅದನ್ನು ಉಳಿಸಿ ಬೆಳೆಸಿಕೊಳ್ಳುವುದನ್ನು ಕಲಿಯಬೇಕಾಗಿತ್ತು. ಆದರೆ ನಾವು ಭಯವನ್ನು ಕಲಿತೆವು. ಅದನ್ನು ಪೋಷಿಸಿ, ಬೆಳೆಸುತ್ತಾ ಬಂದೆವು. ಈಗ ಪದೇ ಪದೇ ಎದುರಾಗುವ ಎಲ್ಲಾ ಸೋಲುಗಳಿಗೂ ಮೂಲ ಕಾರಣವೇ ಈ ಭಯ!
ನಾವು ಭಯ ಪಡುತ್ತ, ಪಡುತ್ತಲೇ ನಮ್ಮ ಗಮನಕ್ಕೇ ಬರದ ಸೂಚನೆಯೊ೦ದನ್ನು ಎಲ್ಲರಿಗೂ ಕೊಡುತ್ತಿರುತ್ತೇವೆ. ನಾನು ತುಂಬಾ ಪುಕ್ಕಲು ಸ್ವಭಾವದವನು/ಳು. ಭಯದಿಂದ ಅತಿಹೆಚ್ಚು ಪೀಡಿತನದ ವ್ಯಕ್ತಿ, ನನ್ನನ್ನು ನೀವೆಷ್ಟು ಬೇಕಾದರೂ ಹೆದರಿಸಬಹುದು ಎಂದು. ಬೇಕಾದರೊಮ್ಮೆ, "ನನಗೆ ಈ ಹೊತ್ತಲ್ಲಿ ಒಬ್ಬಳೇ ಓಡಾಡುವುದೆ೦ದರೆ ಕೊಂಚ ಹೆದರಿಕೆ" ಎಂದು ಯಾರಿಗಾದರೂ ಹೇಳಿದರೆ, ಮರುದಿನದಿ೦ದಲೇ ಅವರು ತಪ್ಪದೇ ನಮ್ಮಲ್ಲಿಗೆ ಬಂದು ಒಬ್ಬರೇ ಓಡಾಡುವುದರಿ೦ದ ಆದ ಅವಘಡಗಳು, ಸುಲಿಗೆ, ಕೊಲೆಗಳ ದೊಡ್ಡ ಪಟ್ಟಿಯನ್ನೇ ತಪ್ಪದೇ ತ೦ದೊಪ್ಪಿಸುತ್ತಾರೆ..
ನಾನು ಯಾವುದೋ ಸಂಗೀತ ಸ್ಪರ್ಧೆಯೊ೦ದಕ್ಕೆ ಹೋಗಬೇಕಿದೆ ಎಂದಿಟ್ಟುಕೊಳ್ಳೋಣ. ನನ್ನ ಮನಸ್ಸು 'ನಾನು ಹಾಡಬಲ್ಲೆ, ನನಗೆ ಒಳ್ಳೆ ಕ೦ಠವಿದೆ' ಎಂದು ತಕ್ಕಮಟ್ಟಿಗೆ ನಂಬಿರುವುದರಿ೦ದಲೇ ನಾನು ಅತ್ತ ಗಮನವಿತ್ತಿರುತ್ತೇನೆ. ಆದರೆ ಇದಷ್ಟೇ ಸಾಲದಲ್ಲ, ನಾನೇನು ಮಾಡುತ್ತೇನೆ? ಮೊದಲು ನನ್ನ ಪರಿಚಯದವರಲ್ಲಿ ಹೇಳಿಕೊಳ್ಳುತ್ತೇನೆ. ನನ್ನ ಪ್ರವೃತ್ತಿಯ ಚೂರು ಸುಳಿವು ಅವರಿಗೆ ಸಿಕ್ಕಿತೋ, ಅಲ್ಲಿಗೆ ಮುಗಿಯಿತು. "ಒಹ್! ಅಲ್ಲಿಗಾ?!, ಅಲ್ಲಿ ಬಹಳವೇ ಕಠಿಣ ಸ್ಪರ್ಧೆ ಇರುತ್ತದೆ ಬಿಡು. ಅಲ್ಲಿ ಆಯ್ಕೆಯಾದರೆ ಅಚ್ಚರಿಯೇ " ಎಂದವರು ಉದ್ಗರಿಸಿದರಲ್ಲಿಗೆ ಶುರು, ಮೊದಲ ಕುಸಿತ ! ಇನ್ನು ನನ್ನ ಆಸೆಯನ್ನು ಇಷ್ಟಕ್ಕೇ ಬದಿಗೊತ್ತಲು ಮನಸ್ಸು ಬಾರದೇ, ನಾನು ಸ್ಪರ್ಧೆ ನಡೆಯುವ ಸ್ಥಳಕ್ಕೆ ಹೊರಡುವೆ. "ಒಹ್! ಅವರು ಹೇಳಿದ್ದು ನಿಜ, ಎಷ್ಟೊಂದು ಸ್ಪರ್ಧಿಗಳು!" ಇಲ್ಲೊಂದು ಖಾತರಿ ಕುಸಿತ! ನಂತರ ತಿರ್ಪುಗಾರರ ಮುಖದರ್ಶನದೊಡನೆ ಪೂರ್ತಿ ಕುಸಿತ! ನಂತರ ಹೇಗೋ ಅಭ್ಯಾಸ ಬಲದಲ್ಲಿ ಕೇವಲ ಕಂಠಸಿರಿಯ ಸಹಾಯದಿಂದ ಏನೋ ಒಂದನ್ನು ಒಪ್ಪಿಸುತ್ತೇನೆ. ಅಲ್ಲಿಗದು 'ಸಂಪೂರ್ಣ ಆತ್ಮಸ್ಥೈರ್ಯ ವಂಚಿತವಾದ ಪ್ರದರ್ಶನ'ವಾಗಿ ಉಳಿದುಬಿಡುತ್ತದೆ.
ಹೀಗೆಲ್ಲ ಹೇಗೆ? ಭಯವನ್ನ ಪ್ರೀತಿಸುತ್ತಾ ಅದರ ಬರದಲ್ಲಿ ನಾವು ಅಂತಹ ಮನಃಸ್ಥಿತಿಗೆ ಇಂಬು ಕೊಡುವಂತಹುದನ್ನೇ ನೋಡುತ್ತಾ ಹೋಗುತ್ತೇವೆ. ನಮಗೇನು ಬೇಕೋ ಅದನ್ನು ನಮ್ಮ ಬದುಕು ನಮಗೆ ಕೊಡಬಲ್ಲದು. ಭಯ ಬೇಕೇ? ಅದು ಸಿಗುತ್ತದೆ. ದ್ವೇಷ ಬೇಕೇ? ಪ್ರೀತಿ ಬೇಕೇ? ಆತ್ಮಸ್ಥೈರ್ಯ ಬೇಕೇ? ಏನು ಬೇಕಾದರೂ ಆಯ್ಕೆ ನಮ್ಮದೇ, ಅಲ್ಲವೇ?
(image- web)
4 comments:
ಸುಷ್ಮಾ,
ತುಂಬ ಉಪಯುಕ್ತವಾದ ಮನೋವಿಜ್ಞಾನದ ಮಾಹಿತಿಯನ್ನು ಹೇಳಿದ್ದೀರಿ. ಆದುದರಿಂದಲೇ ಭಗವತ್-ಗೀತೆಯಲ್ಲಿ "ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು" ಎಂದು ಹೇಳಿರುವದು. ನಿಮಗೆ ಧನ್ಯವಾದಗಳು.
ಕಾಕಾ, ವ೦ದನೆಗಳು :)
ಇವು ನನ್ನ ಮನಸ್ಸಿಗೆ ಹೊಳೆದ 'ವಿಜ್ಞಾನ'ವಷ್ಟೆ!!
'ನಮಗೇನು ಬೇಕೋ ಅದನ್ನು ನಮ್ಮ ಬದುಕು ನಮಗೆ ಕೊಡಬಲ್ಲದು....' ಎ೦ಥಾ ಅರ್ಥ ಪೂರ್ಣ ಚಿ೦ತನೆ! ಅಭಿನ೦ದನೆಗಳು ಸುಷ್ಮಾ.
tumba chennagide lekhana ... dhanyavadagaLu
Post a Comment